Published on [Permalink]
Reading time: 2 minutes

gangaavatarana by da ra bender

ಗಂಗಾವತರಣ -ಅಂಬಿಕಾತನಯದತ್ತ

ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||

೧ ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ.

೨ ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯೇ ಇಳಿದು ಬಾ.

೩ ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ, ಕಣ್ಣ ಕಣ ತೊಳಿಸಿ ಉಸಿರ ಎಲೆ ಎಳಸಿ ನುಡಿಯ ಸಸಿ ಮೊಳಸಿ ಹಿಗ್ಗಿ ಬಾ; ಎದೆಯ ನೆಲೆಯಲ್ಲಿ ನೆಲೆಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ ಇಳಿದು ಬಾ ತಾಯೇ ಇಳಿದು ಬಾ.

೪ ಕಂಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮತ್ತೆ ಹೊಡೆಮರಳಿ ಬಾ, ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ ಇಳಿದು ಬಾ ತಾಯೇ ಇಳಿದು ಬಾ.

೫ ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿಸುಳಿದು ಬಾ; ಶಿವಶುಭ್ರ ಕರುಣೆ ಅತಿಕಿಂಚದರುಣೆ ವಾತ್ಸಲ್ಯವರಣೆ ಇಳಿ ಇಳಿದು ಬಾ ಇಳಿದು ಬಾ ತಾಯೇ ಇಳಿದು ಬಾ.

೬ ಕೊಳೆಯ ತೊಳೆವವರು ಇಲ್ಲ ಬಾ ಬೇರೆ ಶಕ್ತಿಗಳ ಹೊಲ್ಲ ಬಾ ಹೀಗೆ ಮಾಡಿದರು ಅಲ್ಲ ಬಾ ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನು ಎತ್ತ ಬಾ.

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ! ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ! ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ! ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ? ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?

೭ ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ ದುಮ್ ದುಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ ಇಳಿದು ಬಾ ತಾಯಿ ಇಳಿದು ಬಾ

೮ ಹರಣ ಹೊಸದಾಗಿ ಹೊಳೆದು ಬಾ ಬಾಳುಬೆಳಕಾಗೆ ಬೆಳೆದು ಬಾ ಕೈ ತೊಳೆದು ಬಾ ಮೈ ತಳೆದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ ಇಳಿದು ಬಾ ತಾಯೇ ಇಳಿದು ಬಾ.

೯ ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ ಇಳಿದು ಬಾ ತಾಯಿ ಇಳಿದು ಬಾ

ಶುಕ್ರವಾರ ೨೪-೭-೧೯೪೨ (ಆ. ಎಕಾದಶಿ)

Several renditions of this lovely poem are available on YouTube.